ಆಂಡರ್‍ಸನ್, ಕಾರ್ಲ್ ಡೇವಿಡ್
	ಅಮೆರಿಕ ಸಂಯುಕ್ತಸಂಸ್ಥಾನಗಳ ಭೌತಶಾಸ್ತ್ರಜ್ಞ (1905-). ನ್ಯೂಯಾರ್ಕ್‍ನಲ್ಲಿ ಜನಿಸಿದ. ಕ್ಯಾಲಿಫೋರ್ನಿಯಾದ ಔದ್ಯೋಗಿಕರಣ ಸಂಸ್ಥೆಯಲ್ಲಿ (ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ವಿದ್ಯಾಭ್ಯಾಸ ಮಾಡಿ 1930ರಲ್ಲಿ ಪದವೀಧರನಾದ. ಕೆಲವು ಕಾಲದ ಮೇಲೆ ಅದೇ ವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ. ವಿಶ್ವಕಿರಣಗಳ (ಕಾಸ್ಮಿಕ್ ರೇಸ್) ಸಂಶೋಧನೆಯಲ್ಲಿ ನಿರತನಾದ ಇವನು 1932ರಲ್ಲಿ ಪಾಸಿಟ್ರಾನ್ ಎಂಬ ಸೂಕ್ಷ್ಮ ಧನ ವಿದ್ಯುತ್ಕಣವನ್ನು ಕಂಡುಹಿಡಿದ. ಇದು ಎಲೆಕ್ಟ್ರಾನ್ ಎಂಬ ಋಣ ವಿದ್ಯುತ್ಕಣದ ಪ್ರತಿಯೋಗಿ. ಡಿರಾಕ್ ಆ ಮೊದಲೇ ವಿವರಿಸಿದ ತತ್ತ್ವದ ಪ್ರಕಾರ ಇಂಥ ಕಣ ಇರಬೇಕಿತ್ತು. ಅದನ್ನು ಪ್ರಾಯೋಗಿಕವಾಗಿ ಸಾಧಿಸಿದ ಹಿರಿಮೆ ಅವನದು. ಈ ಶೋಧನೆಗಾಗಿ 1936ರ ನೊಬೆಲ್ ಭೌತಶಾಸ್ತ್ರ ಪಾರಿತೋಷಕವನ್ನು ಈತನಿಗೂ ವಿಕ್ಟರ್‍ಹೆಸ್ ಎಂಬಾತನಿಗೂ ಹಂಚಲಾಯಿತು. ಮೆಸಾನ್ ಕಣದ (ಎಲೆಕ್ಟ್ರಾನ್ ಮತ್ತು ಪ್ರೋಟಾನ್‍ಗಳ ಮಧ್ಯಸ್ಥವಾದ ಭಾರವನ್ನು ಹೊಂದಿದ) ಶೋಧನೆಯಲ್ಲಿಯೂ ಈತನ ಪಾತ್ರ ಮುಖ್ಯವಾದುದೇ. ನೆಡರ್ ಮೇಯರ್ ಎಂಬಾತ ಇವನ ಸಂಶೋಧನೆಗಳಲ್ಲಿ ಸಹಕಾರಿಯಾಗಿದ್ದ.

(ಟಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ